Tuesday, August 20, 2024

 ರಾಷ್ಟ್ರೀಯ ವೈಜ್ಞಾನಿಕ ಮನೋಭಾವ ದಿನ 2024 - 

ವೈಜ್ಞಾನಿಕ ಸಮಗ್ರತೆ ಮತ್ತು ತಡೆರಹಿತ ತರ್ಕಬದ್ಧ ವಿಚಾರ

- ರವೀಂದ್ರ ರುದ್ರವಾಡಿ


ಇತ್ತೀಚೆಗೆ ಮುಂಬಯಿಯ ಟಾಟಾ ಸಮಾಜ ವಿಜ್ಞಾನಗಳ ಸಂಸ್ಥೆಯು(TISS) ‘ಪ್ರೊಗ್ರೆಸ್ಸಿವ್ ಸ್ಟೂಡೆಂಟ್ ಫೋರಂ’ನ್ನು ನಿಷೇಧಿಸಿದೆಯಂತೆ. ಕೇವಲ ಟಾಟಾ ಸಂಸ್ಥೆಗಷ್ಟೇ ಅಲ್ಲ; ಭಾರತದ ಬಹುತೇಕ ಸಂಸ್ಥೆ, ವಿದ್ಯಾಕೇಂದ್ರಗಳಿಗೆ ಈ ಪ್ರಗತಿಪರ ಎನ್ನುವ ಪದ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಪ್ರಗತಿಪರ ಎಂದರೇನು? ಯಾರು ಪ್ರಗತಿಪರರು? ನಾವು ಪ್ರಗತಿಪರವಾಗಿರಬೇಕೋ ? ವಿರುದ್ಧವಾಗಿರಬೇಕೋ ? ಎಂಬ ಕುರಿತು ಗೊಂದಲ ಸೃಷ್ಟಿಸಲಾಗುತ್ತಿದೆ. ಉದ್ದೇಶಪೂರ್ವಕವಾಗಿಯೇ ಪ್ರಗತಿಯನ್ನು ವಿರೋಧಿಸುವ, ಪ್ರಗತಿಪರತೆ ಮತ್ತು ಪ್ರಗತಿಪರರನ್ನು ವಿರೋಧಿಸುವ ಅಂಧಾನುಕರಣ ಮನಃಸ್ಥಿತಿ ಬೇರೂರುತ್ತಿದೆ. ಇಂಥ ಜಡ್ಡುಗಟ್ಟಿದ ಮನಃಸ್ಥಿತಿಯೇ ಭಾರತವನ್ನು ಮೇಲೇಳಲು ಬಿಡುತ್ತಿಲ್ಲ. ವ್ಯವಸ್ಥೆಯ ಕುರಿತು ಕಾಳಜಿ ಹೊಂದಿರುವ, ವ್ಯವಸ್ಥೆಯ ಸುಧಾರಣೆಗಾಗಿ ಯೋಚಿಸುವ ಮತ್ತು ಪ್ರಯತ್ನಿಸುವ ಮನಃಸ್ಥಿತಿಯ ಪ್ರಗತಿಪರತೆ ಅಂಧಾನುಯಾಯಿಗಳಿಗೆ ಬೇಕಿಲ್ಲ. ಈಗಿರುವ ವ್ಯವಸ್ಥೆಯಲ್ಲಿ ಸಾಕಷ್ಟು ಲಾಭಗಳನ್ನು ಪಡೆಯುತ್ತಿರುವ ಇಂಥ ದುಷ್ಟ ಮನಃಸ್ಥಿತಿಯು ಇದನ್ನು ಯಥಾವತ್ತಾಗಿ ಮುಂದುವರೆಸುವ ಮತ್ತು ಸಾಧ್ಯವಾದರೆ ಇನ್ನಷ್ಟು ಅಸಮಾನ ಲಾಭ ಪಡೆಯುವ ನಿಟ್ಟಿನಲ್ಲಿ ಒಟ್ಟು ವ್ಯವಸ್ಥೆಯನ್ನು ಅಧಃಪತನದತ್ತ ಕೊಂಡೊಯ್ಯಲು ಪ್ರಯತ್ನಿಸುತ್ತದೆ. ಇಲ್ಲಿ ವೈಯಕ್ತಿಕ ಮತ್ತು ಅಸಮಾನ ಲಾಭದ ಉದ್ಧೇಶವಿರುತ್ತದೆಯೇ ಹೊರತು ಸಾಮುದಾಯಿಕ ಮತ್ತು ಸಮಾನ ನ್ಯಾಯದ ಪ್ರತಿಪಾದನೆಯಿರುವುದಿಲ್ಲ. ಇದಕ್ಕೆ ತದ್ವಿರುದ್ಧವಾಗಿ ಪ್ರಗತಿಪರತೆಯು ಒಟ್ಟು ಸಮಾಜದ ಏಳಿಗೆಯನ್ನು ಬಯಸುವ, ಎಲ್ಲರಿಗೂ ಒಳಿತನ್ನು ಬಯಸುವ ಮನಃಸ್ಥಿತಿ. ಇಂಥ ಪ್ರಗತಿಪರತೆಯನ್ನು ವಿರೋಧಿಸುವುದೆಂದರೆ ತಮ್ಮ ಅಸ್ತಿತ್ವವನ್ನು ತಾವೇ ಅಲ್ಲಗಳೆದಂತೆ.


ಇಡೀ ರಾಷ್ಟ್ರದಲ್ಲಿ ಆಗಷ್ಟ್ 20 ರಂದು ಸದ್ಭಾವನಾ ದಿನವೆಂದು ಆಚರಿಸಲಾಗುತ್ತಿದೆ. ಶಾಲೆ-ಕಾಲೇಜು, ಕಛೇರಿಗಳಲ್ಲಿ ತೋರಿಕೆಗೆ ಸದ್ಭಾವನಾ ಪ್ರತಿಜ್ಞೆಯನ್ನು ಮೊಳಗಿಸುತ್ತ ಮನದಲ್ಲಿ ಮತ್ತದೇ ಅಸಹನೆಯ ವಿಕಾರತೆಯನ್ನು ತುಂಬಿಕೊಳ್ಳುವುದು ಉತ್ಪ್ರೇಕ್ಷೆಯಲ್ಲವೇ. ಇಂದು ರಾಷ್ಟ್ರೀಯ ಸದ್ಭಾವನಾ ದಿನವನ್ನಾಗಿ ಕರೆಕೊಟ್ಟಿರುವುದರ ಹಿನ್ನೆಲೆ - ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ರಾಜೀವ ಗಾಂಧಿಯವರ ಹತ್ಯೆ. ಇದೇ ದಿನ ದುರ್ಭಾವನೆಯಿಂದ ರಾಷ್ಟ್ರೀಯತಾವಾದಿ, ಪ್ರಗತಿಪರ ಚಿಂತಕ ಡಾ. ನರೇಂದ್ರ ದಾಬೋಲ್ಕರ್ ಅವರನ್ನೂ ಹತ್ಯೆ ಮಾಡಲಾಗಿತ್ತು. ರಾಜೀವ್ ಗಾಂಧಿ ಹಾಗೂ ದಾಬೋಲ್ಕರ್ ಹತ್ಯೆಯಾದ ದಿನವನ್ನೇ ಇಂಥ ಆಚರಣೆಗೆ ಕರೆಕೊಟ್ಟಿದ್ದು ಹತ್ಯೆಯ ಹಿಂದಿನ ಅಸಹಿಷ್ಣುತೆ, ಧರ್ಮಾಂಧ ವಿಕೃತಿ, ದುರ್ಭಾವನೆಯನ್ನು ಖಂಡಿಸಲು. ಇಡೀ ಭಾರತವೇ ಸದ್ಭಾವನೆಯಲ್ಲಿ ಇಂದು ಮಿಂದೇಳುತ್ತದೆ. ಸದ್ಭಾವನೆಯೆಂಬುದು ಇದೊಂದೇ ದಿನಕ್ಕೆ ಸೀಮಿತವಾಗಿಲ್ಲ; ಆದರೂ ಇದೊಂದು ದಿನವಾದರೂ ಸದ್ಭಾವನೆಗಳು ಹೃದಯಕ್ಕಿಳಿದರೆ ಸಾರ್ಥಕ! ನೋಡೋಣ. ಸದ್ಭಾವನೆಯೆಂಬುದು ವ್ಯಕ್ತಿಯಲ್ಲಿ ಶಾಶ್ವತವಾಗಿ ನೆಲೆಸಲಿ ಎಂದು ಆಶೀಸೋಣ. 


ಇಂದು ‘ರಾಷ್ಟ್ರೀಯ ವೈಜ್ಞಾನಿಕ ಮನೋಭಾವ ದಿನ’ವೂ(NSTD) ಹೌದು. 2013 ರಲ್ಲಿ ಆಗಷ್ಟ 20ರಂದು ದಕ್ಷಿಣ ಭಾರತದ ಹೆಸರಾಂತ ಜನ ವಿಜ್ಞಾನ ಚಳುವಳಿಗಾರ, ವಿಚಾರವಾದಿ, ಜನ ವೈದ್ಯ, ಮಹಾರಾಷ್ಟ್ರದ ಡಾ.ನರೆಂದ್ರ ದಾಬೋಲ್ಕರ್ ಎಂಬ ಭಾರತೀಪುತ್ರನನ್ನು ಧರ್ಮಾಂಧರು ಹತ್ಯೆಗೈದು ವಿಕೃತಿ ಮೆರೆದ ದಿನ. ಪುರಾವೆಯಿಲ್ಲದೇ ಏನನ್ನೂ ನಂಬದಿರಿ ಎಂದು ತಾರ್ಕಿಕ ಚಿಂತನೆಯನ್ನು ಮುನ್ನೆಲೆಗೆ ತಂದು ಜನರಲ್ಲಿ ವೈಚಾರಿಕತೆಯನ್ನು ರೂಢಿಸಿಕೊಳ್ಳುವಂತೆ ಕರೆ ನೀಡಿದ್ದ ಒಬ್ಬ ವೈದ್ಯ ಜಡ್ಡುಗಟ್ಟಿದ ಸಾಮಾಜಿಕ ಮನಃಸ್ಥಿತಿಯ ಯಥಾಸ್ಥಿತಿವಾದಿಗಳಿಗೆ ಸವಾಲಾಗಿದ್ದರು. ಜನಸಾಮಾನ್ಯರ ಜೀವನ ಮಟ್ಟ ಸುಧಾರಿಸಬೇಕು, ದೇಶ ಸದೃಢವಾಗಬೇಕೆಂದು ಬಯಸಿದ ವ್ಯಕ್ತಿಯನ್ನು ಧಾರ್ಮಿಕ ಅಂಧಾನುಯಾಯಿ ಉಗ್ರಗಾಮಿಗಳು ಹೊಡೆದುರುಳಿಸಿದರು. ಇದು ಆರಂಭವೂ ಅಲ್ಲ; ಇದೇ ಕೊನೆಯೂ ಅಲ್ಲ. ಸಮಾಜ ಸುಧಾರಣೆಗೆ ಪ್ರಯತ್ನಿಸಿದ ಬುದ್ಧನಾದಿಯಾಗಿ, ಚಾರ್ವಾಕರು, ಸಾವಿರಾರು ಶರಣರು, ಫುಲೆ ದಂಪತಿಗಳು, ನಾರಾಯಣ ಗುರು, ವಿವೇಕಾನಂದರು, ರಾಜಾರಾಮ ಮೋಹನರಾಯ, ಶಾಹು ಮಹಾರಾಜ, ಶಿವಾಜಿ ಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್, ಪೆರಿಯಾರ್, ಅಂಬೇಡ್ಕರ್ ಮುಂತಾದ ಸಮಾಜ ಸುಧಾರಕರನ್ನು ಅಸಹನೆಯಿಂದಲೇ ಕಾಣಲಾಗಿತ್ತು. ಮೇಲಾಗಿ ಇವರನ್ನು ಹತ್ಯೆಗೈಯುವ ಪ್ರಯತ್ನಗಳೂ ಆಗಿವೆ. ಹತ್ಯೆಯ ಪ್ರಯತ್ನಗಳಲ್ಲಿ ಸಂಚುಕೋರ ರಾಷ್ಟ್ರದ್ರೋಹಿಗಳ ಕೈ ಮೇಲಾಗಿದೆ. ಡಾ. ನರೇಂದ್ರ ದಾಬೋಲ್ಕರ್ ಅಲ್ಲದೇ ಸಮಚಿಂತನೆಯ ವಿಚಾರವಾದಿಗಳಾಗಿದ್ದ ಗೋವಿಂದ ಪಾನ್ಸಾರೆ, ಡಾ.ಎಂ.ಎಂ.ಕಲಬುರಗಿ, ಗೌರಿ ಲಂಕೇಶ ಮುಂತಾದವರು ಈ ವಿಕೃತಿಗೆ ಬಲಿಯಾಗಿದ್ದಾರೆ. ಪ್ರೊ.ಭಗವಾನ್, ಯೋಗೇಶ ಮಾಸ್ಟರ್, ಆನಂದ ತೇಲ್ತುಂಬ್ಡೆ, ಇತ್ತೀಚೆಗೆ ನಿಧನರಾದ ಪ್ರೊ.ಮಹೇಶಚಂದ್ರ ಗುರು, ಸ್ಟ್ಯಾನ್ ಸ್ವಾಮಿ ಅವರಂಥ ವಿಚಾರವಾದಿಗಳು ಧರ್ಮಾಂಧರಿಂದ ಅನೇಕ ಸಂಕಷ್ಟಗಳನ್ನು ಎದುರಿಸಿದ್ದಾರೆ. ಇವರ ಹತ್ಯೆಗೆ ಕಾರಣವೇನು ಎಂದು ಅವಲೋಕಿಸಿದಾಗ  ತಮ್ಮ ಸುತ್ತಲಿನ ಜನರ ಏಳಿಗೆಗಾಗಿ ಸಮಸಮಾಜದ ಕನಸು ಹೊತ್ತು ಬೆಳಕೀವ ಸೂರ್ಯನಂತಾದವರು. ಇವರ‌್ಯಾರೂ ರಾಷ್ಟ್ರೀಯತೆ, ಏಕತೆ, ಆಡಳಿತ, ಜನಸಮುದಾಯ, ಸಂವಿಧಾನಕ್ಕೆ ಸಣ್ಣ ಅಪಚಾರವನ್ನೂ ಎಸಗಿರಲಿಲ್ಲ. ಈ ಹತ್ಯೆಗಳು ನ್ಯಾಯಯುತವೇ ? ಧಾರ್ಮಿಕ ಉಗ್ರಗಾಮಿಗಳು ಈ ಹತ್ಯೆಗಳನ್ನು ಜನಮಾನಸದಿಂದ ಅಳಿಸಿಹಾಕುವ ಮತ್ತು ಇಂಥ ಇನ್ನಷ್ಟು ಹತ್ಯೆಗಳಿಗೆ ಪ್ರಚೋದನೆ ನೀಡುವ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಇಂಥಾ ಪ್ರಯತ್ನಗಳಿಗೂ ಒಂದು ಇತಿಹಾಸವೇ ಇದೆ ಎಂಬುದು ನಾಚಿಕೆಗೇಡಿನ ಸಂಗತಿ. ಭಾರತದ ಸತ್ಪ್ರಜೆಗಳಾದ ಎಲ್ಲರೂ ಇದನ್ನು ಖಂಡಿಸಬೇಕು.


‘ಅಖಿಲ ಭಾರತ ಜನ ವಿಜ್ಞಾನ ಜಾಲ’ವು(AIPSN) ಈ ಹತ್ಯೆಗಳನ್ನು ಖಂಡಿಸುತ್ತ, ಅವರೆಲ್ಲರೂ ಪ್ರತಿಪಾದಿಸಿದ ವಿಚಾರಗಳನ್ನು ಮುನ್ನೆಲೆಗೆ ತಂದು ‘ವ್ಯಕ್ತಿಗಳನ್ನು ಕೊಲ್ಲಬಹುದು; ವಿಚಾರಗಳನ್ನಲ್ಲ’ ಎಂಬ ಸಂದೇಶವನ್ನು ಕೊಡಬಯಸುತ್ತದೆ. ಜನವಿಜ್ಞಾನ ಚಳುವಳಿಯ ಎಲ್ಲಾ ಸೋದರ ಸಂಘಟನೆಗಳು ಮತ್ತು ಡಾ.ನರೇಂದ್ರ ದಾಬೋಲ್ಕರ್ ಅವರು ಮಹಾರಾಷ್ಟ್ರದಲ್ಲಿ ಸ್ಥಾಪಿಸಿದ್ದ ‘ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ ಸಮಿತಿ’ಗಳು ಒಟ್ಟಾಗಿ 2018ರಿಂದ ಪ್ರತಿ ವರ್ಷ ಆಗಷ್ಟ 20 ನ್ನು ರಾಷ್ಟ್ರೀಯ ವೈಜ್ಞಾನಿಕ ಮನೋಭಾವ ದಿನವೆಂದು ನಿರ್ಧರಿಸಿ ದೇಶದಾದ್ಯಂತ ಆಚರಿಸಲಾಗುತ್ತಿದೆ. ಇದು ಪುರಾವೆ ಆಧಾರಿತ ತಾರ್ಕಿಕ ಚಿಂತನೆ ಮತ್ತು ವಿಮರ್ಶಾತ್ಮಕ ಚಿಂತನೆ, ವಿಶ್ಲೇಷಣಾತ್ಮಕತೆ, ವೈಚಾರಿಕತೆ, ವೈಜ್ಞಾನಿಕ ಮನೋಭಾವವನ್ನು ಪಸರಿಸಿ ಜನಜೀವನವನ್ನು ಮತ್ತಷ್ಟು ಉತ್ತಮಪಡಿಸಲು ಸಾಮಾಜಿಕ-ರಾಜಕೀಯ ಚಳುವಳಿಗಳ ಬೆಳಕಿನಲ್ಲಿ ಮುನ್ನಡೆಯುವ ದಿನವಾಗಿದೆ. ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ ಮುಖ್ಯವಾಗಿ ಮೂರು ಉಪಕ್ರಮಗಳಿವೆ. ಸರ್ಕಾರದ ಪಾತ್ರ, ವೈಜ್ಞಾನಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ಜವಾಬ್ದಾರಿಗಳು ಮತ್ತು ಶೈಕ್ಷಣಿಕ ಸ್ವಾತಂತ್ರ್ಯದ ಸವೆತ ಮತ್ತು ಹುಸಿ ವಿಜ್ಞಾನದ ಪ್ರಸರಣವನ್ನು ಎದುರಿಸುವ ಅಗತ್ಯತೆ. ಇದು ವಿಜ್ಞಾನಿಗಳು, ಬುದ್ಧಿಜೀವಿಗಳು ಮತ್ತು ವಕೀಲರನ್ನು ಪುರಾವೆ ಆಧಾರಿತ ಚಿಂತನೆಯನ್ನು ಉತ್ತೇಜಿಸಲು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಕರೆ ನೀಡುತ್ತದೆ. ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸುತ್ತದೆ. ಭಾರತದ ಸಂವಿಧಾನದ ವಿಧಿ 51A(h)ವು ಭಾರತದ ಪ್ರತಿ ನಾಗರಿಕರು ವೈಜ್ಞಾನಿಕ ಮನೋಭಾವ, ಮಾನವತಾವಾದ, ಜಿಜ್ಞಾಸೆ (ವೈಚಾರಿಕತೆ, ಪ್ರಶ್ನಿಸುವಿಕೆ, ತರ್ಕ) ಮತ್ತು ಸುಧಾರಣಾವಾದವನ್ನು(ಪ್ರಗತಿಪರತೆ) ಬೆಳೆಸಿಕೊಳ್ಳಬೇಕೆಂದು ಹೇಳಿದೆ. ರಾಜಕೀಯ, ವಿಜ್ಞಾನ, ಸಮಾಜ, ವೈದ್ಯಕೀಯ, ಶಿಕ್ಷಣ, ಸಾರ್ವಜನಿಕ ವ್ಯವಸ್ಥೆ, ಇತಿಹಾಸ ಮುಂತಾದ ಕ್ಷೇತ್ರಗಳಲ್ಲಿನ ಧಾರ್ಮಿಕ ಮತಾಂಧರ ಅತಿಕ್ರಮಣವನ್ನು ಕಿತ್ತೆಸೆದು ವೈಜ್ಞಾನಿಕ ಮನೋಭಾವವನ್ನು ಸ್ಥಾಪಿಸುವ ಪ್ರಯತ್ನಗಳಾಗಬೇಕಿವೆ.


ಶರಣ ನುಲಿಯ ಚಂದಯ್ಯನವರ ಜಯಂತಿ, ಮಾಜಿ ಪ್ರಧಾನಿಗಳಾದ ರಾಜೀವ್ ಗಾಂಧಿಯವರ ಜನ್ಮದಿನ, ಸ್ವಾಭಿಮಾನಿ ಚಳುವಳಿಯ ಹರಿಕಾರರಾದ ನಾರಾಯಣ ಗುರುಗಳ ದೇಹಾಂತ್ಯವಾದ ದಿನ, ಡಾ. ನರೇಂದ್ರ ದಾಬೋಲ್ಕರ್ ಹತ್ಯೆಯಲ್ಲದೇ ಡಾ.ಎಂ.ಎಂ. ಕಲಬುರಗಿ, ಗೌರಿ ಲಂಕೇಶ ಮುಂತಾದ ತರ್ಕಬದ್ಧ ಚಿಂತನೆಯ ಪ್ರತಿಪಾದಕರು ಹತ್ಯೆಯಾದ ದಿನಗಳು ಒಟ್ಟೊಟ್ಟಿಗೇ ಇವೆ. ದ್ವೇಷ ಅಸಹಿಷ್ಣುತೆಗೆ ಬಲಿಯಾದ ರಾಜೀವ್ ಗಾಂಧಿಯವರ ಸ್ಮರಣೆಯನ್ನು ರಾಷ್ಟ್ರೀಯ ಸದ್ಭಾವನಾ ದಿನವೆಂದು ಆಚರಿಸುತ್ತ ಬರಲಾಗಿದೆ.  ಸದ್ಭಾವನೆ ಎಂಬ ಪದಕ್ಕಾದರೂ ಅರ್ಥ ಬರಬೇಕೆಂದರೆ ನಿಜ ಅರ್ಥದ ಸದ್ಭಾವನೆ, ಸ್ವಾತಂತ್ರ್ಯ, ಸಹೋದರತೆಯನ್ನು ಮೈಗೂಡಿಸಿಕೊಂಡು ವಿಶ್ವಮಾನವರಾಗಬೇಕು. ಎಲ್ಲಾ ರೀತಿಯ ಅಸಮಾನತೆಗಳು, ತಾರತಮ್ಯ, ಅಸಹಿಷ್ಣುತೆ, ಪ್ರತ್ಯೇಕತೆಗಳನ್ನು ಖಂಡಿಸಿ ಐಕ್ಯತೆಯನ್ನು ಸಾರಬೇಕು. ಆಳುವ ಸರಕಾರಗಳು ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳನ್ನು ಆದ್ಯತೆಯಾಗಿ ಪರಿಗಣಿಸಿ ಹೆಚ್ಚಿನ ಅನುದಾನ ನೀಡಿ ಪೋಷಿಸಬೇಕು. ಶಿಕ್ಷಣದಿಂದಲೇ ಪ್ರಗತಿ ಸಾಧ್ಯ. ಪರಿಸರ ವಿದ್ವಂಸಕ ಅಭಿವೃದ್ಧಿ ಮಾದರಿಯನ್ನು ಕೈಬಿಟ್ಟು, ಪರಿಸರ ಪೂರಕ ಸುಸ್ಥಿರ ಅಭಿವೃದ್ಧಿಯನ್ನು ಯೋಜಿಸಬೇಕು. ಧಾರ್ಮಿಕ ರಾಜಕಾರಣವನ್ನು ಕಳಚಿ ಅಭಿವೃದ್ಧಿ ರಾಜಕಾರಣವನ್ನು ಮೈಗೂಡಿಸಿಕೊಳ್ಳಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದು ಸಂವಿಧಾನಕ್ಕೆ ಬದ್ಧರಾಗಿರಬೇಕು. ಭಾರತದಲ್ಲಿ ಬಂಗಾಳವನ್ನೊಳಗೊಂಡು ಇಡೀಯ ದಕ್ಷಿಣ ಭಾರತವು ವೈಚಾರಿಕತೆಯ ಗಾಳಿ ಬೀಸಿದ ಪ್ರದೇಶ. ಬಹುತೇಕ ವಿಚಾರವಾದಿಗಳು, ಪ್ರಗತಿಪರರು ಜೀವ ಸವೆಸಿದ ನೆಲವಿದು. ಇಲ್ಲಿನ ಮಣ್ಣಿನಲ್ಲೇ ಆ ಗುಣ ಬೆರೆತಿದೆ. ಆಗಷ್ಟ ೨೦ ರಂದು ಡಾ.ನರೇಂದ್ರ ದಾಬೋಲ್ಕರ್ ಹತ್ಯೆ-ಆಗಷ್ಟ ೩೦ ರಂದು ಡಾ.ಎಂ.ಎಂ.ಕಲಬುರಗಿಯವರ ಹತ್ಯೆಯ ನಡುವಿನ ಹತ್ತು ದಿನಗಳ ಕಾಲ ರಾಷ್ಟ್ರೀಯ ವೈಜ್ಞಾನಿಕ ಮನೋಭಾವ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಕಾರ್ಯಕ್ರಮಗಳ ಮೂಲಕ ಇವರೆಲ್ಲರ ವಿಚಾರಗಳನ್ನು ಮೈಗೂಡಿಸಿಕೊಳ್ಳುತ್ತ ಸದೃಢ ಭಾರತವನ್ನು ಕಟ್ಟೋಣ. ಧರ್ಮದ ನಶೆಯೇರಿಸಿಕೊಂಡ ಅಂಧಾನುಯಾಯಿಗಳಲ್ಲಿ ಪ್ರಗತಿಪರತೆ, ವೈಚಾರಿಕತೆ, ವೈಜ್ಞಾನಿಕ ಮನೋಭಾವಗಳನ್ನು ಮೂಡಿಸುವ ಪ್ರಯತ್ನ ಮಾಡಬೇಕಿದೆ. 'ವ್ಯಕ್ತಿಗಳ ಸಾವು ಅಂತಿಮವಲ್ಲ, ವಿಚಾರಗಳೇ ಅಂತಿಮ; ವಿಚಾರಗಳಿಗೆ ಸಾವಿಲ್ಲ' ಎಂಬುದನ್ನು ಸಾರುತ್ತ ಪ್ರಗತಿಪರತೆಯ ನೊಗವನ್ನು ಹೊತ್ತು ಸಾಗೋಣ.

No comments:

Post a Comment