Monday, January 15, 2024

 ಸಂಕ್ರಾಂತಿ


        ಈಗ ಎಲ್ಲೆಡೆಯೂ ಸಂಕ್ರಾಂತಿಯ ಸಂಭ್ರಮ. ಇದು ಭಾರತೀಯರು ಪರಂಪರೆಯಿಂದಲೂ ಆಚರಿಸಿಕೊಂಡು ಬಂದಿರುವ ಒಂದು ಸೌರಮಾನ ಹಬ್ಬ. ದೇಶದ ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರುಗಳು, ವಿವಿಧ ಬಗೆಯ ಆಚರಣೆಗಳ ಮೂಲಕ ತನ್ನ ಅಸ್ತಿತ್ವವನ್ನು ಸಾರಿರುವ ಸಂಕ್ರಾಂತಿಯನ್ನು ನಾವು ಹೇಗೆಲ್ಲಾ ಆಚರಿಸಬೇಕು ಎಂಬ ಜಿಜ್ಞಾಸೆ ಹುಟ್ಟಿಕೊಳ್ಳುವುದು ಸಹಜ. ನಾವು ಆಚರಿಸುವ ಪ್ರತಿ ಹಬ್ಬಗಳು ಸಡಗರ, ಸಂಭ್ರಮ, ಶುಭ್ರತೆ, ಸಾಮಾಜಿಕ ಸಹಕಾರ, ಹೊಂದಾಣಿಕೆ, ಸಹಬಾಳ್ವೆ, ಸಹಜೀವನದ ಪ್ರತೀಕಗಳಾಗಿರುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಜನಪದರಿಂದ ಹುಟ್ಟಿಕೊಂಡ ಹಲವಾರು ಹಬ್ಬಗಳಲ್ಲಿ ವೈಜ್ಞಾನಿಕತೆಯೂ ಮೇಳೈಸಿದೆ. ಧಾರ್ಮಿಕರಿಂದ ಹುಟ್ಟಿಕೊಂಡ ಅನೇಕ ಹಬ್ಬಗಳು ಕೇವಲ ಆಚರಣೆಗಳಿಂದ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಜನ ಜೀವನದೊಂದಿಗೆ ಬೆಸೆದುಕೊಂಡ ಹಬ್ಬಗಳು ಜನಜೀವನ ಬದಲಾದಂತೆ ತನ್ನೊಳಗಿನ ವೈಜ್ಞಾನಿಕತೆಯನ್ನು ಮರೆಮಾಚಿ, ಧಾರ್ಮಿಕ ಸ್ವರೂಪ ಪಡೆದುಕೊಂಡು ಕೇವಲ ಅನುಪಯುಕ್ತ ಆಚರಣೆಗಳ ಬೆನ್ನತ್ತಿ ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡಿವೆ. ಹಬ್ಬಗಳ ನೈಜ ಆಚರಣೆಗಳು ಅದರ ಹಿಂದಿನ ವೈಜ್ಞಾನಿಕ ಹಿನ್ನೆಲೆಯನ್ನು ತಿಳಿಯಬಯಸುವ ನಮಗೆ ಅವುಗಳು ಬರುವ ಸನ್ನಿವೇಶಗಳಾದ ಕ್ಯಾಲೆಂಡರ್ ಕುರಿತು ತಿಳಿಯಬೇಕಾದ ಅನಿವಾರ್ಯತೆ ಇದೆ. 


    ಈಗ ನಾವು ಬಳಸುತ್ತಿರುವುದು ಗ್ರೇಗೋರಿಯನ್ ಕ್ಯಾಲೆಂಡರ್. ಚಾಂದ್ರಮಾನ ಹಾಗೂ ಸೌರಮಾನ ಕ್ಯಾಲೆಂಡರ್ ಪದ್ಧತಿಗಳೆರಡನ್ನೂ ಸಂಯೋಜಿಸಿ ಬಳಸುತ್ತಿದ್ದೇವೆ. ಒಂಥರಾ ಕಲಬೆರಕೆ..! ಎಲ್ಲವೂ ಗೊಂದಲಮಯ..! ಭಾರತೀಯರು ಅನಾದಿಕಾಲದಿಂದಲೂ ಅನುಸರಿಸಿಕೊಂಡು ಬಂದಿರುವುದು ಚಾಂದ್ರಮಾನ ಕ್ಯಾಲೆಂಡರ್ ಪದ್ಧತಿಯನ್ನು. ಚಾಂದ್ರಮಾನ ಕ್ಯಾಲೆಂಡರ್ ಲೆಕ್ಕಾಚಾರ ನಕ್ಷತ್ರ ಮಂಡಲಗಳ ಆಧಾರದಲ್ಲಿ ನಿರ್ಧರಿತವಾಗುತ್ತದೆ. ಋತುಮಾನಗಳು, 12 ಮಾಸಗಳು, ಅಮಾವಾಸ್ಯೆಗಳು, ಹುಣ್ಣಿಮೆಗಳು, ಮಳೆಯ ನಕ್ಷತ್ರಗಳು, ಶುಕ್ಲಪಕ್ಷ, ಕೃಷ್ಣಪಕ್ಷ ಎಲ್ಲವೂ ಅನುಸರಿಸುವುದು ನಕ್ಷತ್ರ ಮಂಡಲ ಆಧಾರದ ಈ ಚಾಂದ್ರಮಾನ ಕ್ಯಾಲೆಂಡರ್ ಮೇಲೇ.. ನಕ್ಷತ್ರ ಮಂಡಲಗಳಲ್ಲಿ ಚಂದ್ರನ ಪರಿಭ್ರಮಣೆಯನ್ನು ಆಧರಿಸಿ 12 ತಿಂಗಳುಗಳ ಕಲ್ಪನೆಯಿಂದ ಹುಟ್ಟಿಕೊಂಡಿದ್ದೇ ಚಂದ್ರಮಾನ ಕ್ಯಾಲೆಂಡರ್. ಅಸಲಿಗೆ ತಿಂಗಳು ಎಂದರೆ ಬೇರೇನೂ ಅಲ್ಲ ಚಂದ್ರ ಎಂದೇ ಅರ್ಥ. ತಿಂಗಳ ಬೆಳವಣಿಗೆಯೇ ಶುಕ್ಲಪಕ್ಷ, ತಿಂಗಳ ಕ್ಷೀಣಿಸುವಿಕೆಯೇ ಕೃಷ್ಣಪಕ್ಷ. ಚಂದ್ರಮಾನ ಮಾಸಗಳು ಚೈತ್ರ, ವೈಶಾಖ, ಜೇಷ್ಠ, ಆಶಾಢ, ಶ್ರಾವಣ, ಭಾದ್ರಪದ, ಅಶ್ವಯುಜ, ಕಾರ್ತಿಕ, ಮಾರ್ಗಶಿರ, ಪುಷ್ಯ, ಮಾಘ ಮತ್ತು ಪಾಲ್ಗುಣ. ಇದು ಈ ನೆಲದ ನಿಜವಾದ ಕ್ಯಾಲೆಂಡರ್. ರಾಮ-ಕೃಷ್ಣರ ಹುಟ್ಟು, ರಾಮಾಯಣ-ಮಹಾಭಾರತಗಳಲ್ಲಿ ಉಲ್ಲೇಖಿಸಿದ ದಿನಗಣನೆ, ಬೌದ್ಧ ಹಬ್ಬಗಳು, ಜೈನ ಹಬ್ಬಗಳು, ಭಾರತದಲ್ಲಿ ಆಚರಿಸಲ್ಪಡುವ ಇತರ ಹಬ್ಬ-ಹರಿದಿನಗಳೆಲ್ಲವೂ ಇರುವುದು ಚಾಂದ್ರಮಾನ ಕ್ಯಾಲೆಂಡರ್ ಅನುಸರಿಸಿಯೇ. ಪಂಚಾಂಗ, ಜ್ಯೋತೀಷ್ಯಗಳು ಚಾಂದ್ರಮಾನ ಕ್ಯಾಲೆಂಡರ್ ಅನುಸರಿಸುವುದಿಲ್ಲ. ಅವು ಹೊಟ್ಟೆಹೊರೆಯಲು ಹುಟ್ಟಿಕೊಂಡವುಗಳು.


    ಇನ್ನು ಸೌರಮಾನದ ಕುರಿತು ತಿಳಿಯೋಣ. ರಾಶಿಗಳಲ್ಲಿ ಸೂರ್ಯನ ಪರಿಭ್ರಮಣೆಯ ಚಲನೆಯನ್ನಾಧರಿಸಿದ ಕಲ್ಪನೆಯಿಂದ ಹುಟ್ಟಿಕೊಂಡಿದ್ದೇ ಸೌರಮಾನ ಕ್ಯಾಲೆಂಡರ್. ಸೌರಮಾನದಲ್ಲೂ 12 ಮಾಸಗಳಿವೆ-ರಾಶಿಗಳೆಂದೇ ಗುರುತಿಸಲಾದ ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ. ಇದು ಗ್ರೀಕರಿಂದ ಭಾರತಕ್ಕೆ ಬಂದಿದ್ದು ಎಂದು ಎಲ್ಲೋ ಓದಿದ ನೆನಪು. ಇದರೊಂದಿಗೆ ಜ್ಯೋತೀಷ್ಯ, ಪಂಚಾಂಗ, ಗ್ರಹಗತಿ, ವಾಸ್ತು ಮುಂತಾದವುಗಳ ಗುಚ್ಛ ಭಾರತವನ್ನು ಸೇರಿ ಇಲ್ಲಿನ ಜನಜೀವನವನ್ನು ಅಲ್ಲೋಲಕಲ್ಲೋಲ ಮಾಡಿರುವುದಂತೂ ಸುಳ್ಳಲ್ಲ. ಸೌರಮಾನದ ಪ್ರಕಾರ ವರ್ಷದಲ್ಲಿ ನಾಲ್ಕು ಸಂಕ್ರಾಂತಿಗಳಿರುತ್ತವೆ. 'ವಸಂತ ಸಂಕ್ರಾಂತಿ' ಮತ್ತು 'ಶರತ್ ಸಂಕ್ರಾಂತಿ' ಎಂಬ ಎರಡು ವಿಷುವತ್ ಸಂಕ್ರಾಂತಿಗಳು. ಇವೆರಡೂ 'ಇಕ್ವಿನಾಕ್ಸ್' ಗಳು ಅಂದರೆ ಹಗಲು ಮತ್ತು ರಾತ್ರಿಗಳು ಸಮವಾಗಿರುವ ವರ್ಷದ ಕೇವಲ ಎರಡು ದಿನಗಳು. ಅಲ್ಲದೆ ಈ ದಿನಗಳಂದು ಸೂರ್ಯೋದಯ ಮತ್ತು ಸೂರ್ಯಾಸ್ತಗಳು ಪೂರ್ವ ಮತ್ತು ಪಶ್ಚಿಮ ದಿಕ್ಕುಗಳ ನೇರ ರೇಖೆಯಲ್ಲಿ ಇರುತ್ತವೆ. 'ಕರ್ಕಾಟಕ ಸಂಕ್ರಾಂತಿ' ಮತ್ತು 'ಮಕರ ಸಂಕ್ರಾಂತಿ' ಎಂಬ ಎರಡು ಅಯನ ಸಂಕ್ರಾಂತಿಗಳು ಇರುತ್ತವೆ. ಇವು ವರ್ಷದ ಸುಧೀರ್ಘ ಹಗಲು ಮತ್ತು ರಾತ್ರಿಗಳನ್ನು ಒಳಗೊಂಡ ದಿನಗಳು. ಇವುಗಳನ್ನು ಬೇಸಿಗೆಯ ಸಂಕ್ರಾಂತಿ ಮತ್ತು ಚಳಿಗಾಲದ ಸಂಕ್ರಾಂತಿ ಎಂದು ಕರೆಯುತ್ತಾರೆ. ವಿಶೇಷವಾಗಿ ಈ ಅಯನ ಸಂಕ್ರಾಂತಿಗಳಂದು ಸೂರ್ಯ ತನ್ನ ಚಲನೆಯ ದಿಕ್ಕನ್ನು ಬದಲಿಸುತ್ತಾನೆ.


    ಈಗ ನಾವು ಆಚರಿಸುತ್ತಿರುವ ಸಂಕ್ರಾಂತಿ ಯಾವ ಕ್ಯಾಲೆಂಡರ್ ನ ಅನುಸರಣೆ ಮತ್ತು ಯಾವ ಹಿನ್ನೆಲೆಯದ್ದು ಎಂದು ನಿಮಗೆ ಸ್ಪಷ್ಟವಾಗಿರಬಹುದು. ನಿಮ್ಮ ಊಹೆಯಂತೆ ಇದು ಸೌರಮಾನ ಕ್ಯಾಲೆಂಡರ್‌ನ ಪ್ರಮುಖ ದಿನ 'ಉತ್ತರಾಯಣ ಸಂಕ್ರಾಂತಿ'. ದಕ್ಷಿಣ ಪಥದಲ್ಲಿದ್ದ ಸೂರ್ಯ ಇಲ್ಲಿಂದಲೇ ಉತ್ತರದ ಕಡೆಗೆ ಸರಿಯಲು ಆರಂಭಿಸುತ್ತಾನೆ. ಉತ್ತರದ ಅಂಚಿಗೆ ತಲುಪಲು ಆರು ತಿಂಗಳು ಬೇಕು. ಮತ್ತೆ ಜೂನ್ ೨೧ ರಂದು ಉತ್ತರದ ತುದಿಯಿಂದ ದಕ್ಷಿಣದ ಕಡೆಗೆ ಪಯಣ ಆರಂಭಿಸುತ್ತಾನೆ; ಹೀಗೇ ನಿರಂತರವಾಗಿ ಸಾಗುತ್ತದೆ. (ಸೂರ್ಯಕೇಂದ್ರ ಸಿದ್ಧಾಂತದಲ್ಲಿ ಸೂರ್ಯನಿಗೆ ಭ್ರಮಣೆಯಿಲ್ಲ, ಸೂರ್ಯನ ಸುತ್ತ ಭೂಮಿ ಸುತ್ತುವುದರಿಂದ ಈ ಎಲ್ಲಾ ಬದಲಾವಣೆಗಳು ಸಂಭವಿಸುತ್ತವೆ. ಓದಿನ ಸರಳತೆಗಾಗಿಯಷ್ಟೇ ಸೂರ್ಯ ಚಲಿಸುತ್ತಾನೆ ಎಂದು ಹೇಳುತ್ತಿದ್ದೇನಷ್ಟೇ.) 


ಈಗ ಮರಳಿ ಸಂಕ್ರಾಂತಿಯ ವಿಷಯಕ್ಕೆ ಬರೋಣ.

    ಯಾವುದೇ ಧಾರ್ಮಿಕ ಹಿನ್ನೆಲೆ ಇಲ್ಲದ ಶುದ್ಧ ವೈಜ್ಞಾನಿಕ ಹಬ್ಬ ಈ ಸಂಕ್ರಾಂತಿ. ಭೂಮಿಯ ಚಲನೆಯಿಂದ ಉಂಟಾಗುವ, ಹವಾಮಾನ ಬದಲಾವಣೆಯ ಪರ್ವ - ಸಂಕ್ರಾಂತಿ.  ಅಸಲಿಗೆ ಡಿಸೆಂಬರ್ 22 ರಂದು ಉತ್ತರಾಯಣ ಸಂಕ್ರಾಂತಿಯು ಶುರುವಾಗುತ್ತದೆ. ಆದರೆ ಸೌರಮಾನ ಪಂಚಾಂಗವನ್ನು ಅನುಸರಿಸುವ ಆರ್ಯರು ಇದನ್ನು ತಮ್ಮ ನಂಬಿಕೆಯಂತೆ ಉತ್ತರಾಯಣದ ಮಕರ ರಾಶಿಯಲ್ಲಿರುವ ಪುಣ್ಯಕಾಲ ಅಂದರೆ ಜನವರಿ 14 ಅಥವಾ 15 ರಂದು ಆಚರಿಸುತ್ತಾರೆ. 


    ಮೈ ಕೊರೆಯುವ ಚಳಿಯನ್ನು ಹೊತ್ತು ತರುವ ಹೇಮಂತ ಋತುವಿನ ಪುಷ್ಯ ಮಾಸದಲ್ಲಿ ವಿಪರೀತ ಚಳಿಯಿಂದ ದೇಹವನ್ನು ರಕ್ಷಿಸಲು ಮೈಯಲ್ಲಿರುವ ಕೊಬ್ಬಿನಂಶವೂ ಕರಗಿ ಹೋಗುತ್ತದೆ. ಚರ್ಮವು ಬೆಳ್ಳಗೆ ಒಡೆದುಕೊಳ್ಳುತ್ತದೆ. ಕೊರೆವ ಚಳಿಗೆ ಚರ್ಮದ ಜೀವಕೋಶಗಳು ನಶಿಸಿ, ಉದುರಿ ಬೀಳತೊಡಗುತ್ತದೆ. ಕೀಲುಗಳು, ಮೂಳೆಗಳ ನಡುವಿನ ಸಂದುಗಳು ಬಿಗಿದುಕೊಳ್ಳುತ್ತವೆ. ಹೆಚ್ಚಿನ ಮೂತ್ರ ವಿಸರ್ಜನೆಯಿಂದ ಮೈಯಲ್ಲಿರುವ ಲವಣಾಂಶವು ಖಾಲಿಯಾಗಿ ದೇಹವು ನಿಸ್ತೇಜವಾಗುತ್ತದೆ. ಇದೇ ಸಂದರ್ಭದಲ್ಲಿ ಆಗಸದಲ್ಲಿ ಮೋಡಗಳು ಆವರಿಸಿಕೊಂಡು ಸೂರ್ಯನ ಬಿಸಿಲೂ ಕಡಿಮೆಯಾಗಿರುತ್ತದೆ. ಕೃಷಿ ಚಟುವಟಿಕೆಗಳು ಈ ಸಂದರ್ಭದಲ್ಲಿ ಅಧಿಕವಾಗಿದ್ದು ಕಾಕತಾಳೀಯವೆಂಬಂತೆ ಹಗಲು ಕಡಿಮೆಯಾಗಿದ್ದು, ರಾತ್ರಿಗಳು ಅಧಿಕವಾಗಿರುವುದರಿಂದ ದೇಹವು ಹೆಚ್ಚು ವಿಶ್ರಾಂತಿಯನ್ನು ಬಯಸುತ್ತದೆ. 


    ಕಳಾಹೀನವಾದ ದೇಹಕ್ಕೆ ತೇಜಸ್ಸನ್ನು ನೀಡಲು ಎಳ್ಳಿನಂಥ ಎಣ್ಣೆ ಪದಾರ್ಥದ ಸೇವನೆ ಅವಶ್ಯಕ. ಇದರೊಂದಿಗೆ ವಿಫುಲ ಖನಿಜಾಂಶವಿರುವ ಬೆಲ್ಲವೂ ಬೆರೆತರೆ ದೇಹಕ್ಕೆ ಉತ್ತಮ ಪೋಷಣೆ ದೊರೆಯುತ್ತದೆ.. ಎಣ್ಣೆಯಂಶವಿರುವ ಕಾಳುಗಳು, ಖನಿಜಾಂಶವಿರುವ ಹಣ್ಣುಗಳು, ಕಾಳುಗಳ ತಿನಿಸು, ತರಕಾರಿ ಮುಂತಾದವುಗಳ ಸೇವನೆ ಈ ಸಂದರ್ಭದ ಅಗತ್ಯತೆ. ಈ ಸುಗ್ಗಿಯ ಕಾಲದಲ್ಲಿ ರೈತಾಪಿ ವರ್ಗ ಹೊಸ ಬೆಳೆಯನ್ನು ಮನೆಗೆ ತಂದು ತನ್ನೊಡನಾಡಿಗಳಿಗೂ ಹಂಚಿ ಅವುಗಳಿಂದ ಮಾಡಿದ ಅಡುಗೆಯನ್ನು ಉಣ್ಣುವ ಮೊದಲ ಹಬ್ಬವಿದು. ಈ ನೆಲದ ಉತ್ಪನ್ನಗಳಾದ  ಕಾಳುಗಳು, ಹಣ್ಣುಗಳು, ತರಕಾರಿಗಳು ಆಯಾ ಋತುಮಾನದಲ್ಲಿ ಒದಗಿ ಬರುತ್ತವೆ. ಅವುಗಳಿಗೆ ಅದರದೇ ಆದ ಮಹತ್ವವಿದೆ. 'ಎಳ್ಳು-ಬೆಲ್ಲ ತಿನ್ನೋಣ, ಒಳ್ಳೆ ಮಾತ್ ಆಡೋಣ' ಎಂದು ಎಲ್ಲರೂ ಪರಸ್ಪರ ಎಳ್ಳು-ಬೆಲ್ಲ ಹಂಚಿಕೊಂಡು ತಿನ್ನುವುದು ಈ ಹಬ್ಬದ ರೂಢಿ. ನೆರೆಹೊರೆಯವರು ಕೂಡಿ ಬಾಳಬೇಕೆಂಬ ಸೋದರತ್ವ, ಹಂಚಿ ತಿನ್ನಬೇಕೆಂಬ ಸಹಬಾಳ್ವೆ, ದ್ವೇಷ ಮರೆತು, ಪ್ರೀತಿ ಹಂಚುವ ಸಾಮರಸ್ಯಗಳೇ ಈ ಹಬ್ಬದ ತತ್ವ. ಇಲ್ಲೆಲ್ಲೂ ಧಾರ್ಮಿಕತೆಯಿಲ್ಲ.


    ಧಾರ್ಮಿಕ ಕಂದಾಚಾರಿಗಳಿಗೆ ಕಾಲು ಚಾಚಲು ಜಾಗ ಸಿಕ್ಕರೆ ಸಾಕು. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಕಂದಾಚಾರಗಳನ್ನು ಹೇರಿಬಿಡುತ್ತಾರೆ. ಪರದುಡಿಮೆಯನ್ನೆ ನಂಬಿ ಬದುಕುವ ಸೋಮಾರಿ ವರ್ಗ ಎಳ್ಳು-ಬೆಲ್ಲವನ್ನೆಲ್ಲಿಂದ ತಿನ್ನಬೇಕು? ಅದಕ್ಕೊಂದು ಹೊಸ ಉಪಾಯ 'ಎಳ್ಳು-ಬೆಲ್ಲವನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ-ಎಂದು ಮುಗ್ದ ಜನರನ್ನು ನಂಬಿಸುವುದು.' ಪುಣ್ಯಕಾಲದ ದಾನ ಶ್ರೇಷ್ಠ-ದಾನಿಗೆ ಪುಣ್ಯ; ಪಡೆದವರಿಗೆ? ಇಂಥ ಬಹುತೇಕ ಸುಳ್ಳುಗಳು ಢಾಳಾಗಿ ಗೋಚರಿಸುತ್ತವೆ. ಆದರೆ ಇದನ್ನು ಮೀರಿದ ಮಾನವೀಯತೆ ಈ ನೆಲದಲ್ಲಿದೆ-ಸಹಜೀವನ-ಇಲ್ಲದವರೊಂದಿಗೆ ಇದ್ದವರು ಹಂಚಿ ತಿನ್ನಬೇಕೆಂಬ ಮನುಷ್ಯತ್ವವನ್ನೇ ವಚನಕಾರರಾದಿಯಾಗಿ ಎಲ್ಲಾ ಸುಧಾರಣಾವಾದಿಗಳೂ ಸಾರುತ್ತ ಬಂದಿರುವುದು. ಅದರೊಂದಿಗೆ ಕಪಟತನವ ಅರಿಯುವ 'ಅರಿವನ್ನೂ' ನೀಡಿದರು. ನಮ್ಮರಿವನ್ನೇ 'ಅರಿ'ಯ ಅಡಿಗಿಟ್ಟು ಅರಿವುಗೇಡಿಗಳಾಗಿ ಕಂದಾಚಾರದ ಹಬ್ಬ ಆಚರಿಸುವದನ್ನು ತಪ್ಪಿಸಿ ಹಬ್ಬದ ಹಿನ್ನೆಲೆ, ವೈಜ್ಞಾನಿಕತೆಯನ್ನು ಅರಿತು ಸಂಭ್ರಮ-ಸಡಗರದಿಂದ ಆಚರಿಸಿದರೆ ಅದಕ್ಕೊಂದು ಅರ್ಥ.


    ಈ ನೆಲದ ಗುಣ ಸಾರುವ ಯುಗಾದಿ, ದೀಪಾವಳಿ, ನಾಗರ ಪಂಚಮಿ, ದಸರಾ, ಎಳ್ಳಮವಾಸೆ, ಮಣ್ಣೆತ್ತಿನಮವಾಸೆ ಮುಂತಾದವುಗಳ ಹಿನ್ನೆಲೆ, ಉಪಯುಕ್ತತೆಯನ್ನರಿತು ಆಚರಿಸಬೇಕು. ಹಬ್ಬ ಯಾವುದಾದರೂ ಆಗಲಿ ನಾವಿರುವ ಪರಿಸರ, ಪ್ರಾಣಿ-ಪಕ್ಷಿ, ವಿವಿಧ ಸಮುದಾಯಗಳು, ಹೀಗೆ ಬೇರೆ ಯಾರಿಗೂ ತೊಂದರೆಯಾಗದೇ ಎಲ್ಲರೂ ಸಂಭ್ರಮಿಸುವಂತೆ 'ಸರ್ವೇಜನಾಃ ಸುಖೀನೋಭವಂತು' ಎನ್ನುವಂತಿದ್ದರೆ ಅದನ್ನು ಆಚರಿಸುವಂತಾಗಲಿ. ಆದರೆ...

ಹಬ್ಬಗಳು 'ಕ್ರೌರ್ಯ-ಶೌರ್ಯದ ಪ್ರತೀಕವಾಗಬಾರದು, ಹಿಂಸೆ-ವಿಜಯಗಳ ಸ್ಮರಣೆಯಾಗಬಾರದು, ಮೋಸ-ಕಪಟತನಗಳ ಮಾರುಕಟ್ಟೆಯಾಗಬಾರದು, ಅಹಂಕಾರ-ಆಡಂಬರದ ಆಚರಣೆಗಳಾಗಬಾರದು;' ಹಬ್ಬಗಳು ಜನಪದರ ಜೀವಸೆಲೆ. ಅಲ್ಲಿ ಸೋದರತೆಯಿರಬೇಕು, ಸಹಜೀವನ ಸೌಂದರ್ಯವಿರಬೇಕು, ಸಾಮಾಜಿಕ ಬದ್ಧತೆಯಿರಬೇಕು, ಸಾಮರಸ್ಯವಿರಲೇಬೇಕು.


No comments:

Post a Comment